ನಿಶ್ಯಸ್ತ್ರೀಕರಣ
	ಒಂದು ದೇಶದ ಭೂ, ನೌಕಾ ಇಲ್ಲವೇ ವಾಯುದಳಗಳ ಗಾತ್ರ, ಸರಂಜಾಮು, ಶಸ್ತ್ರ ಮುಂತಾದವನ್ನು, ಇಲ್ಲವೇ ಒಂದು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಪರಿಮಿತಗೊಳಿಸುವ, ಕಡಿಮೆ ಮಾಡುವ ಇಲ್ಲವೇ ಪೂರ್ಣವಾಗಿ ಇಲ್ಲವಾಗಿಸುವ ಕ್ರಮ. ಅದು ಐಚ್ಛಿಕ ಇಲ್ಲವೇ ಅಪರಿಹಾರ್ಯ, ಏಕಪಕ್ಷೀಯ ಇಲ್ಲವೇ ಅನ್ಯೋನ್ಯ, ಸಾರ್ವತ್ರಿಕ ಇಲ್ಲವೇ ಸ್ಥಳೀಯ, ತಾತ್ಪೂರ್ತಿಕ ಇಲ್ಲವೇ ಸಾರ್ವಕಾಲಿಕ, ಪರಿಮಾಣಾತ್ಮಕ ಇಲ್ಲವೇ ಗುಣಾತ್ಮಕ ಆಗಿರಬಹುದು ; ಮತ್ತು ಅಸ್ತ್ರಗಳ ನಿರ್ಮಾಣ, ವ್ಯಾಪಾರ, ಸ್ವಾಧೀನ ಹಾಗೂ ಪ್ರಯೋಗಗಳಿಗೆ ಮತ್ತು ಸಶಸ್ತ್ರ ಪಡೆಗಳ ಭರ್ತಿ, ಸಂಖ್ಯೆ ಇಲ್ಲವೇ ನೆಲೆಯ ನಿರ್ಣಯಗಳಿಗೆ ಸಂಬಂಧಿಸಿರಬಹುದು. ನಿಶ್ಶಸ್ತ್ರೀಕರಣ ಅಂತರರಾಷ್ಟ್ರೀಯ ರಾಜಕಾರಣದ ಮೂಲಭೂತ ಸಮಸ್ಯೆಗಳಲ್ಲೊಂದು. ಪ್ರಪಂಚದ ಪ್ರಮುಖ ರಾಷ್ಟ್ರಗಳ ಶಸ್ತ್ರೀಕರಣದ ಕಾರ್ಯಕ್ರಮಗಳಲ್ಲಿ ಹೆಚ್ಚಳ ಇಲ್ಲವೇ ಇಳಿತಗಳು ಅಂತರರಾಷ್ಟ್ರೀಯ ರಾಜಕೀಯ ವಾತಾವರಣದ ಮಾಪಕಗಳಾಗಿವೆ. ಪ್ರಾಚೀನ ಚೀನ, ಮೆಸೊಪೊಟೇಮಿಯ, ಭಾರತ ಮತ್ತು ಗ್ರೀಸ್ ದೇಶಗಳ ಇತಿಹಾಸಗಳಲ್ಲಿ ನಿಶ್ಶಸ್ತ್ರೀಕರಣದ ಒಡಂಬಡಿಕೆಗಳ ಉಲ್ಲೇಖಗಳಿವೆ. ಈ ಸಮಸ್ಯೆಗೆ ಸಂಬಂಧಿಸಿದ ಸಂಧಾನಗಳು ಆಧುನಿಕ ಇತಿಹಾಸದಲ್ಲಿ, ವಿಶೇಷವಾಗಿ ಮಹಾಯುದ್ದಗಳ ಅನಂತರ, ಪ್ರಾಧಾನ್ಯ ತಳೆದಿವೆ ಮತ್ತು ಪ್ರಪಂಚದ ಲಕ್ಷ್ಯ ಸೆಳೆದಿವೆ.

	ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ನಿಶ್ಶಸ್ತ್ರೀಕರಣದ ನಾಲ್ಕು ಪರಿಕಲ್ಪನೆಗಳುಂಟು. 1 ಯುದ್ಧದಲ್ಲಿ ಪರಾಜಯಗೊಂಡ ರಾಷ್ಟ್ರದ ದಂಡನೆಯ ಕ್ರಮವಾಗಿ ಅದರ ಶಸ್ತ್ರ ಬಲವನ್ನು ಕಡಿಮೆ ಮಾಡುವುದು ಇಲ್ಲವೇ ಪರಿಮಿತಗೊಳಿಸುವುದು. 1919ರ ವರ್ಸೆಲ್ಸ್‍ಕೌಲಿನಲ್ಲಿ ಜರ್ಮನಿ ಮತ್ತು ಅದರ ಮಿತ್ರ ರಾಷ್ಟ್ರಗಳ ನಿಶ್ಶಸ್ತ್ರೀಕರಣ ಕುರಿತ ನಿಬಂಧನೆ ಒಂದು ಉದಾಹರಣೆ. 2 ನಿರ್ದಿಷ್ಟ ಭೌಗೋಳಿಕ ಕ್ಷೇತ್ರಗಳಿಗೆ ಅನ್ವಯಿಸುವ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ನಿಶ್ಶಸ್ತ್ರೀಕರಣ. ಉದಾಹರಣೆಗೆ 1817ರಲ್ಲಿ ಅಮೆರಿಕ ಮತ್ತು ಬ್ರಿಟನ್‍ಗಳ ನಡುವೆ ಆದ ರಷ್-ಬೇಗಟ್ ಒಪ್ಪಂದ. ಇದರ ಫಲವಾಗಿ ಅಮೆರಿಕ ಕೆನಡಗಳ ನಡುವೆ ಇರುವ ಮಹಾಸರೋವರಗಳು ನಿಶ್ಶಸ್ತ್ರೀಕೃತ ವಲಯವಾಗಿವೆ. 3 ಎಲ್ಲ ಶಸ್ತ್ರಾಸ್ತ್ರಗಳ ನಾಶವಾಗಬೇಕೆಂಬುದು ಒಂದು ಆದರ್ಶ. ಆಗಾಗ್ಗೆ ಸರ್ಕಾರಗಳು ಈ ಆಶಯ ವ್ಯಕ್ತಪಡಿಸುವುದುಂಟು. 4 ಹಿಂದೆ ಇದ್ದ ರಾಷ್ಟ್ರಗಳ ಕೂಟ (ಲೀಗ್ ಆಫ್ ನೇಷನ್ಸ್) ಈಗ ಇರುವ ವಿಶ್ವಸಂಸ್ಥೆ ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕ ಮಾಡಿಕೊಳ್ಳಲಾಗುವ ಅಂತರರಾಷ್ಟ್ರೀಯ ಒಪ್ಪಂದಗಳ ಮೂಲಕ ರಾಷ್ಟ್ರಗಳ ಶಸ್ತ್ರಾಸ್ತ್ರಗಳ ಇಳಿತಾಯ ಅಥವಾ ನಿಯಂತ್ರಣ, ಇಂಥ ಅಂತರರಾಷ್ಟ್ರೀಯ ಒಪ್ಪಂದಗಳ ಸಾಧ್ಯತೆಯನ್ನು ಕುರಿತಂತೆ ನಿಶ್ಶಸ್ತ್ರೀಕರಣದ ಮಾತು ಈಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ.

	1899ರಲ್ಲಿ ಮೊದಲನೆಯ ಬಾರಿಗೆ ಹಾಲೆಂಡಿನ ಹೇಗ್‍ನಲ್ಲಿ ಅಂತರರಾಷ್ಟ್ರೀಯ ನಿಶ್ಶಸ್ತ್ರೀಕರಣವನ್ನು ಕುರಿತ ಒಂದು ಸಮ್ಮೇಳನ ಜರುಗಿತು. ದುಷ್ಪರಿಣಾಮಕಾರಕ ಅನಿರ್ಬಂಧಿತ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಕೊಂಚವಾದರೂ ನಿಯಂತ್ರಿಸಬೇಕೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸತತೋತ್ಸಾಹದ, ಆದರೆ ಸಾಮಾನ್ಯವಾಗಿ ವಿಫಲವಾದ, ಪ್ರಯತ್ನಗಳು ಅಂದಿನಿಂದಲೂ ನಡೆಯುತ್ತಲೇ ಬಂದಿವೆ. ಒಂದನೆಯ ಮಹಾಯುದ್ಧದ ಅಂತ್ಯದಲ್ಲಾದ ವರ್ಸೇಲ್ಸ್ ಶಾಂತಿಸಂಧಾನದ ಪ್ರಕಾರ ಜರ್ಮನಿಯನ್ನು ಕಡ್ಡಾಯವಾಗಿ ನಿಶ್ಶಸ್ತ್ರೀಕರಿಸಲಾಯಿತು. ನಿಶ್ಶಸ್ತ್ರಿಕರಣವನ್ನು ಕುರಿತಂತೆ ಅಂತರರಾಷ್ಟ್ರೀಯ ಸೂತ್ರಗಳನ್ನು ರಾಷ್ಟ್ರಗಳ ಕೂಟದ ಒಡಂಬಡಿಕೆಯಲ್ಲಿ ಸೇರಿಸಲಾಗಿತ್ತು. 1926-27ರಲ್ಲಿ ರಾಷ್ಟ್ರಗಳ ಕೂಟ ನಿಶ್ಶಸ್ತ್ರೀಕರಣದ ಬಗ್ಗೆ ವಿಶ್ವಸಮ್ಮೇಳನವೊಂದನ್ನು ಸೇರಿಸಲು ಪೂರ್ವಭಾವಿಯಾಗಿ ಆಯೋಗವೊಂದನ್ನು ನೇಮಿಸಿತು. ಸದಸ್ಯರಾಷ್ಟ್ರಗಳ ಸೈನ್ಯಗಳ ವೆಚ್ಚಗಳ ನಿಯಂತ್ರಣದ ಮೂಲಕ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ಪರಿಮಿತಗೊಳಿಸಲು ಅದು ಪ್ರಯತ್ನಿಸಿತಾದರೂ ಈ ನಿಟ್ಟಿನಲ್ಲಿ ಯಾವ ಸರ್ವಸಮ್ಮತ ನಿರ್ಣಯವೂ ಸಾಧ್ಯವಾಗಲಿಲ್ಲ. ಅನಂತರ ನಿರ್ದಿಷ್ಟ ರಾಷ್ಟ್ರಗಳ ನಡುವೆ ಕೆಲವು ನಿಯಮಿತ ನಿಶ್ಯಸ್ತ್ರೀಕರಣ ಒಪ್ಪಂದಗಳಾದವು. 1930ರಲ್ಲಿ ಬ್ರಿಟನ್, ಜಪಾನ್ ಮತ್ತು ಅಮೆರಿಕಗಳ ನಡುವೆ ಆದ ನೌಕಾಸ್ತ್ರ ನಿಯಂತ್ರಣ ಒಪ್ಪಂದ ಒಂದು ಉದಾಹರಣೆ. ಆದರೆ ನಿಶ್ಯಸ್ತ್ರೀಕರಣ ಸಾಮಾನ್ಯ ನೀತಿಯಾಗಬೇಕೆಂಬ ಉದ್ದೇಶದಿಂದ 1932ರಲ್ಲಿ ರಾಷ್ಟ್ರಗಳ ಕೂಟ ಕರೆದ ವಿಶ್ವ ನಿಶ್ಯ್ಶಸ್ತ್ರೀಕರಣ ಸಮ್ಮೇಳನ ಯಶಸ್ವಿಯಾಗಲಿಲ್ಲ. ಏಕೆಂದರೆ ಜರ್ಮನಿ ಅಷ್ಟರೊಳಗೆ ಚೇತರಿಸಿಕೊಂಡು ಯುದ್ಧ ಸನ್ನದ್ಧವಾಗುತ್ತಿತ್ತು. ಆದರೂ ಕೆಲವು ರಾಷ್ಟ್ರಗಳು ಶಸ್ತ್ರಾಸ್ತ್ರಗಳನ್ನು ಸ್ವಲ್ಪಮಟ್ಟಿಗಾದರೂ ಪರಿಮಿತಗೊಳಿಸುವುದಕ್ಕೆ ಪ್ರಯತ್ನ ಮುಂದುವರಿಸಿದುವು. ಆದರೆ ನಿಶ್ಶಸ್ತ್ರೀಕರಣದ ಬಗ್ಗೆ ಯಾವ ಮಹತ್ತ್ವದ ಪ್ರಯತ್ನಗಳೂ ನಡೆಯದಿದ್ದರಿಂದ ಅಂತರರಾಷ್ಟ್ರೀಯ ಪರಿಸ್ಥಿತಿ ಹದಗೆಡುತ್ತ ಬಂತು. 1939ರಲ್ಲಿ ಎರಡನೆಯ ಮಹಾಯುದ್ಧ ಸಂಭವಿಸಿತು. ಈ ಯುದ್ಧದ ಅಂತ್ಯದಲ್ಲಿ ಪರಮಾಣುಶಕ್ತಿಯ ಶಸ್ತ್ರಾಸ್ತ್ರಗಳ ಮತ್ತು ಅವುಗಳನ್ನು ನಿಯಂತ್ರಣಗೊಳಿಸುವ ಸಮಸ್ಯೆಯನ್ನು ಪ್ರಪಂಚ ಎದುರಿಸಬೇಕಾಗಿ ಬಂದುದರಿಂದ ನಿಶ್ಯ್ಶಸ್ತ್ರೀಕರಣದ ಪ್ರಶ್ನೆ ಮತ್ತೆ ತಲೆಯೆತ್ತಿತು. 1946ರ ಶರತ್ಕಾಲದಲ್ಲಿ ನ್ಯೂಯಾರ್ಕಿನಲ್ಲಿ ಸೇರಿದ್ದ ವಿಶ್ವಸಂಸ್ಥೆಯ ಮಹಾ ಸಭೆ ನಿಶ್ಯಸ್ತ್ರೀಕರಣವನ್ನು ಚರ್ಚಿಸಿತು. ಎಲ್ಲ ರಾಷ್ಟ್ರಗಳ ಪಡೆಗಳ ಗಣತಿಯ ಪ್ರಶ್ನೆಯ ಬಗ್ಗೆ ಚರ್ಚೆ ನಡೆಯಿತು. ಆದರೆ ಅದಕ್ಕೆ ಒಪ್ಪಿಗೆ ದೊರಕಲಿಲ್ಲ. ಶಸ್ತ್ರಾಸ್ತ್ರ ಮತ್ತು ಸಶಸ್ತ್ರ ಪಡೆಗಳ ತ್ವರಿತ ಸಾರ್ವತ್ರಿಕ ನಿಯಂತ್ರಣ ಮತ್ತು ಕಡಿತ ಆಗಬೇಕೆಂಬ ತತ್ತ್ವಕ್ಕೆ ಮನ್ನಣೆ ನೀಡುವ ನಿರ್ಣಯವೊಂದು 1946ರ ಡಿಸೆಂಬರ್ 14ರಂದು ಅಂಗೀಕೃತವಾಯಿತು. ಎಲ್ಲ ರಾಷ್ಟ್ರಗಳೂ ಸಾಮಾನ್ಯವಾಗಿ ಅನುಸರಿಸಬೇಕದ ಕ್ರಮಗಳನ್ನು ಭದ್ರತಾ ಸಮಿತಿ ತ್ವರಿತವಾಗಿ ಜಾರಿಗೆ ಕೊಡಬೇಕೆಂದು ಶಿಫಾರಸು ಮಾಡಲಾಯಿತು. ಶಸ್ತ್ರಾಸ್ತ್ರಗಳ ಮತ್ತು ಸಶಸ್ತ್ರ ಪಡೆಗಳ ನಿಯಂತ್ರಣ ಹಾಗೂ ಮೇಲ್ವಿಚಾರಣೆಗಳಿಗೆ ಅವಕಾಶ ನೀಡಲಾಯಿತು. ಪರಮಾಣು ಮತ್ತು ಇತರ ಎಲ್ಲ ಮಾರಕ ಅಸ್ತ್ರಗಳ ತಾತ್ಕಾಲಿಕ ಹಾಗೂ ಭವಿಷ್ಯದ ನಿರೋಧವೇ ಜರೂರು ಉದ್ದೇಶವೆಂದು ಸಾರಲಾಯಿತು. ಆದರೆ ಈ ಎಲ್ಲ ಉದ್ದೇಶಗಳೂ ಕಾರ್ಯಾಚರಣೆಯಲ್ಲಿ ಬರಲಿಲ್ಲ. 1952ರಲ್ಲಿ ವಿಶ್ವಸಂಸ್ಥೆ ಈ ವಿಷಯವಾಗಿ ಸಂಪೂರ್ಣ ಮಾಹಿತಿ ದೊರಕಿಸಿಕೊಳ್ಳುವುದಕ್ಕೆ ನಿಶ್ಯ್ಶಸ್ತ್ರೀಕರಣ ಸಮಿತಿಯೊಂದನ್ನು ನೇಮಿಸಿತು. ಪರಮಾಣು ಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಉಪಯೋಗಿಸಬೇಕೆನ್ನುವ ಸಲಹೆಗೆ 1953ರಲ್ಲಿ ಸ್ವಲ್ಪ ಮಟ್ಟಿನ ಮನ್ನಣೆ ದೊರಕಿತು. ಮುಂದೆ ನಾಲ್ಕು ವರ್ಷಗಳ ಅನಂತರ ಅಂತರರಾಷ್ಟ್ರೀಯ ಪರಮಾಣುಶಕ್ತಿ ಸಂಸ್ಥೆ ಅಸ್ತಿತ್ವದಲ್ಲಿ ಬಂತು. ಶಸ್ತ್ರಾಸ್ತ್ರ ನಿಯಂತ್ರಣದ ಮತ್ತು ನಿಶ್ಯಸ್ತ್ರೀಕರಣದ ಅಂಗ ಸಂಸ್ಥೆಯೊಂದನ್ನು 1961ರಲ್ಲಿ ಅಮೆರಿಕ ರಚಿಸಿತು. ರಾಷ್ಟ್ರಗಳ ನಡುವಣ ತಕರಾರುಗಳನ್ನು ಯುದ್ಧದಿಂದ ಪರಿಹರಿಸಿಕೊಳ್ಳದೆ ಶಾಂತಿಯುತವಾಗಿ ಕಾನೂನಿನ ಮಾರ್ಗದಿಂದ ಬಗೆಹರಿಸಿಕೊಳ್ಳಬೇಕೆನ್ನುವುದೇ ಈ ಸಂಸ್ಥೆಯ ಗುರಿ. ಪಶ್ಚಿಮದ ರಾಷ್ಟ್ರಗಳು ಹಾಗೂ ಸೋವಿಯತ್ ದೇಶವೂ ನಿಶ್ಯಸ್ತ್ರೀಕರಣದ ಪ್ರಶ್ನೆಯನ್ನು ವಿಶ್ವಸಂಸ್ಥೆ ಮತ್ತು ಅನೇಕ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ 1946ರಿಂದ ಪ್ರಸ್ತಾಪ ಮತ್ತು ಪ್ರತಿಪ್ರಸ್ತಾಪ ಮಾಡುತ್ತಲೇ ಬಂದಿವೆಯಾದರೂ ಉದ್ದೇಶಗಳು ಕೈಗೂಡಿಲ್ಲ.

	ಭೀಕರ ಅಸ್ತ್ರಗಳ ಪ್ರಯೋಗವನ್ನು ತಪ್ಪಿಸುವ ಉದ್ದೇಶದಿಂದ ಪರಮಾಣು ಅಸ್ತ್ರ ವಿಸ್ತರಣ ನಿಷೇಧ ಕೌಲೊಂದಕ್ಕೆ ಎಲ್ಲ ರಾಷ್ಟ್ರಗಳೂ ಒಪ್ಪಿಕೊಳ್ಳುವಂತೆ ಮಾಡಲು ಪ್ರಯತ್ನ ನಡೆಯುತ್ತಿದೆ. ಪರಮಾಣು ಅಸ್ತ್ರಗಳ ಹೆಚ್ಚಳವನ್ನು ವಿರೋಧಿಸುವುದು ಹಾಗೂ ಪರಮಾಣು ಶಕ್ತಿಯ ಉಪಯೋಗವನ್ನು ಶಾಂತಿಯುತ ಉದ್ದೇಶಗಳಿಗೆ ಬಳಸಿಕೊಳ್ಳುವಂತೆ ಮಾಡುವುದು ಇದರ ಗುರಿಗಳು. ಆದರೆ ಈ ಒಡಂಬಡಿಕೆ ಎಲ್ಲ ರಾಷ್ಟ್ರಗಳಿಗೆ ರಕ್ಷಣೆಯ ಭರವಸೆ ನೀಡುವುದಿಲ್ಲ. ಈಗಾಗಲೇ ಪರಮಾಣು ಅಸ್ತ್ರಗಳನ್ನು ಹೊಂದಿರುವ ಪ್ರಬಲ ರಾಷ್ಟ್ರಗಳೂ ಅವನ್ನು ನಾಶಗೊಳಿಸಬೇಕಾಗಿಲ್ಲ. ಆದರೆ ಇದು ಪರಮಾಣು ಅಸ್ತ್ರಗಳನ್ನು ಪಡೆಯಬೇಕೆನ್ನುವ ರಾಷ್ಟ್ರಗಳಿಗೆ ಮಾತ್ರ ತಡೆ ಒಡ್ಡುತ್ತದೆ. ಇದು ಈ ಕೌಲಿನ ತಾರತಮ್ಯ ನೀತಿ. ಆದ್ದರಿಂದ ಈ ಒಡಂಬಡಿಕೆಗೆ ಹಲವು ದೇಶಗಳು ಒಪ್ಪಿಗೆ ನೀಡಿಲ್ಲ. ಸ್ವತಃ ಪರಮಾಣು ಅಸ್ತ್ರಗಳನ್ನು ತಯಾರಿಸುವ ಸಾಮಥ್ರ್ಯ ಪಡೆದಿದೆಯಾದರೂ ಅವನ್ನು ತಯಾರಿಸುವುದಿಲ್ಲವೆಂದೂ ಪರಮಾಣುಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗಷ್ಟೇ ಬಳಸಿಕೊಳ್ಳುವುದಾಗಿಯೂ ನಿರ್ಧಾರ ಮಾಡಿಕೊಂಡಿರುವ ಭಾರತ ಈ ಒಡಂಬಡಿಕೆಗೆ ಸಹಿ ಹಾಕದಿರುವುದಕ್ಕೆ ಇದರ ಈ ತಾರತಮ್ಯ ದೃಷ್ಟಿಯೇ ಕಾರಣ. ಆಯಕಟ್ಟಿನ ಅಸ್ತ್ರಗಳ ನಿಯಂತ್ರಣ ಕುರಿತ ಮಾತುಕತೆಗಳು ಅಮೆರಿಕ ಮತ್ತು ಸೋವಿಯತ್ ದೇಶಗಳ ನಡುವೆ ನಡೆಯುತ್ತಲೇ ಇವೆ.

	ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿಯಿಂದ ಇರಬಯಸುವ ಹಾಗೂ ಜಗತ್ತಿನಲ್ಲಿ ಶಾಶ್ವತವಾಗಿ ಶಾಂತಿ ನೆಲೆಗೊಳ್ಳಬೇಕೆನ್ನುವ ಭಾರತ ಸ್ವತಂತ್ರವಾದಂದಿನಿಂದಲೂ ನಿಶ್ಯಸ್ತ್ರೀಕರಣದಲ್ಲಿ ಉತ್ಸಾಹ ತೋರಿಸಿದೆ. ಇದಕ್ಕಾಗಿ ತನ್ನಿಂದಾದಷ್ಟು ಪ್ರಯತ್ನ ಮಾಡುತ್ತಲೇ ಬಂದಿದೆ. ಅದು ಇತ್ತೀಚೆಗೆ ವಿಶ್ವದ 20 ರಾಷ್ಟ್ರಗಳೊಂದಿಗೆ ಶಾಂತಿಯುತ ಉದ್ದೇಶಗಳಿಗೆ ಪರಮಾಣುಶಕ್ತಿಯ ಉಪಯೋಗ ಕುರಿತ ಒಂದು ಒಪ್ಪಂದ ಮಾಡಿಕೊಂಡಿದೆ.

	ಪ್ರಬಲ ರಾಷ್ಟ್ರಗಳೂ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳೂ ಶಾಶ್ವತವಾಗಿ ಶಾಂತಿಯಿಂದ ಇರಬಯಸಿ ತಮ್ಮ ಒಪ್ಪಿಗೆ ನೀಡಿದಾಗಲೇ ನಿಶ್ಯ್ಶಸ್ತ್ರೀಕರಣ ಸಾಧ್ಯ. ಭಯಂಕರ ಮಾರಕಾಸ್ತ್ರಗಳಿಂದ ವಿಶ್ವದ ನಾಗರಿಕತೆಗೆ ಅಳಿಗಾಲ ಬರಬಹುದು ಎಂಬುದು ರಾಷ್ಟ್ರಗಳಿಗೆ ಮನವರಿಕೆಯಾಗಿದೆಯಾದರೂ ಪರಸ್ಪರ ಭೀತಿ ಸಂಶಯಗಳು ಆ ದೇಶಗಳನ್ನು ಪೀಡಿಸುತ್ತಿವೆಯಾದ್ದರಿಂದ ನಿಶ್ಯಸ್ತ್ರೀಕರಣದ ಸದುದ್ದೇಶ ಇನ್ನೂ ಕಾರ್ಯಾಚರಣೆಗೆ ಬಂದಿಲ್ಲ. ಬದಲಾಗಿ ಹೆಚ್ಚು ಹೆಚ್ಚು ಭೀಕರವಾದ ಮಾರಕಾಸ್ತ್ರಗಳ ಉಪಜ್ಞೆ ಹಾಗೂ ತಯಾರಿಕೆ ನಡೆಯುತ್ತಲೇ ಇವೆ. ಪ್ರಬಲ ರಾಷ್ಟ್ರಗಳಿಗೆ ತಮ್ಮ ಬಲವನ್ನು ನೋಡಿಯೇ ಭಯವಾಗುತ್ತಿದೆಯಾದ್ದರಿಂದ ಅವು ಶಸ್ತ್ರಾಸ್ತ್ರಗಳ ಸ್ಪರ್ಧೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿವೆ. ಆದರೆ ಅಮೆರಿಕದ ಇಲ್ಲವೇ ಸೋವಿಯತ್ ದೇಶದ ಎದುರು ನಿಲ್ಲಲು ಸ್ವಲ್ಪವೂ ಸಾಮಥ್ರ್ಯ ಇಲ್ಲದಿರುವ ರಾಷ್ಟ್ರಗಳೂ ಯುದ್ಧಕ್ಕೆ ಹಾತೊರೆಯುತ್ತಿವೆ. ವಿಶ್ವ ಸಂಸ್ಥೆಯ ಮಹಾಸಭೆಯ ಪೂರ್ಣ ನಿಶ್ಯಸ್ತ್ರೀಕರಣ ನಿರ್ಣಯಗಳನ್ನು ಬಹಿರಂಗವಾಗಿ ಸಮರ್ಥಿಸುವ ಚಿಕ್ಕಪುಟ್ಟ ರಾಷ್ಟ್ರಗಳೇ ತಮ್ಮ ನೆರೆರಾಷ್ಟ್ರಗಳ ವಿರುದ್ಧ ಬಳಸಲು ಹೆಚ್ಚು ಹೆಚ್ಚು ಶಸ್ತ್ರಾಸ್ತ್ರಗಳನ್ನು ನೀಡಬೇಕೆಂದು ಅಮೆರಿಕ ಮತ್ತು ಸೋವಿಯತ್ ದೇಶಗಳನ್ನು ಯಾಚಿಸುತ್ತಿವೆ.					(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ